Wednesday, June 3, 2009

ಮಂಪರು ಬರಿಸುವ ನ್ಯಾರ್ಕೊಲೆಪ್ಸಿ

ಕಚೇರಿಯಲ್ಲಿ ಕೆಲವರು ಕೆಲಸ ಮಾಡುವ ವೇಳೆ ಇದ್ದಕ್ಕಿದ್ದಂತೆ ನಿದ್ದೆಗೆ ಜಾರುವ ಪ್ರವೃತ್ತಿಯನ್ನು ನಾವು ಕಾಣಬಹುದು. ಕೆಲಸ ಮಾಡುತ್ತಿದ್ದಂತೆ ತೂಕಡಿಸಲು ಆರಂಭಿಸುತ್ತಾರೆ. ನಿದ್ದೆಗೆ ಶರಣಾಗಿ, ಎಚ್ಚರವಾಗುತ್ತಾರೆ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ನಿದ್ದೆ ಮಾಡುತ್ತಾರೆ. ಪಕ್ಕದಲ್ಲಿದ್ದವರಿಗೆ ಇದು ತಮಾಷೆಯ ಸಂಗತಿ ಎನಿಸಬಹುದು. ಇವರನ್ನು ನೋಡಿ ಮುಸಿ ಮುಸಿ ನಗಬಹುದು. ಆದರೆ, ಇದೊಂದು ಕಾಯಿಲೆ. ಈ ರೋಗದಿಂದ ಬಳಲುತ್ತಿರುವವರಿಗೆ ಇದೊಂದು ನುಂಗಲಾರದ ಬಿಸಿ ತುಪ್ಪ. ಹೇಳಿಕೊಳ್ಳಲಾಗದ ವೇದನೆ.
ವೈದ್ಯಕೀಯ ಭಾಷೆಯಲ್ಲಿ ಇದನ್ನು ನ್ಯಾರ್ಕೊಲೆಪ್ಸಿ ಎಂದು ಕರೆಯಲಾಗುತ್ತದೆ. ನ್ಯಾರ್ಕೊಲೆಪ್ಸಿ ನರರೋಗಕ್ಕೆ ಸಂಬಂಸಿದ ರೋಗ. ನಿದ್ದೆಯನ್ನು ನಿಯಂತ್ರಿಸುವ ಮಿದುಳಿನ ಭಾಗದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದಾಗಿ ಯಾವಾಗ ನಿದ್ದೆ ಮಾಡಬೇಕು, ಯಾವಾಗ ಎಚ್ಚರವಾಗಬೇಕು ಎಂಬುದನ್ನು ನಿಯಂತ್ರಿಸುವ ಮಿದುಳಿನ ಭಾಗ ಕೆಲಸ ನಿರ್ವಹಿಸುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಹಾಗಾಗಿ ನ್ಯಾರ್ಕೊಲೆಪ್ಸಿ ರೋಗದಿಂದ ಬಳಲುತ್ತಿರುವವರು ಕೆಲಸ ಮಾಡುವಾಗ, ಅಡುಗೆ ಮಾಡುವಾಗ, ವಾಹನ ಚಾಲನೆ ಮಾಡುವಾಗ ಎಲ್ಲೆಂದರಲ್ಲಿ ನಿದ್ದೆಗೆ ಜಾರುತ್ತಾರೆ.
ನ್ಯಾರ್ಕೊಲೆಪ್ಸಿ ೨೦೦೦ ಮಂದಿ ಪೈಕಿ ಒಬ್ಬರನ್ನು ಕಾಡುತ್ತದೆ ಎನ್ನುವುದು ವೈದ್ಯರ ಅಭಿಮತ. ವಿಶ್ವಾದ್ಯಂತ ಸುಮಾರು ೩೦ ಲಕ್ಷ ಮಂದಿ ರೋಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಆನುವಂಶೀಕವಾಗಿಯೂ ಕಾಡುತ್ತದೆ. ಸುತ್ತಲ ವಾತಾವರಣ, ಪರಿಸರದ ಪ್ರಭಾವವೂ ಪ್ರಮುಖ ಪಾತ್ರ ವಹಿಸುತ್ತದೆ. ಬಹುತೇಕ ಮಂದಿಗೆ ಈ ಸಮಸ್ಯೆ ಗೋಚರವಾಗುವುದು ೧೦-೨೫ ವರ್ಷಗಳ ವಯೋಮಾನದಲ್ಲಿ. ನ್ಯಾರ್ಕೊಲೆಪ್ಸಿ ಜೀವನದುದ್ದಕ್ಕೂ ಇರುವ ಸ್ಥಿತಿ. ಆದರೆ, ಜೀವನ ಶೈಲಿಯಲ್ಲಿನ ಬದಲಾವಣೆ ಹಾಗೂ ವೈದ್ಯಕೀಯ ಸಲಹೆ ಮೇರೆಗೆ ರೋಗದ ಲಕ್ಷಣಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಕ್ರಿಯಾಶೀಲ ಬದುಕನ್ನು ಅನುಭವಿಸಬಹುದು.
ನ್ಯಾರ್ಕೊಲೆಪ್ಸಿಯಿಂದ ನರಳುವವರು ‘ಹೈಪೊಕ್ರೆಟಿನ್’ ಕೊರತೆಯಿಂದ ಬಳಲುತ್ತಾರೆ ಎನ್ನುತ್ತಾರೆ ವೈದ್ಯರು. ಹೈಪೊಕ್ರೆಟಿನ್, ಮಿದುಳಿನಲ್ಲಿ ಉತ್ಪತ್ತಿಯಾಗುವ ರಾಸಾಯನಿಕ. ಇದು ವ್ಯಕ್ತಿಯ ಜಾಗೃತ ಮನಸ್ಸನ್ನು ಕ್ರಿಯಾಶೀಲಗೊಳಿಸುತ್ತದೆ. ನಿದ್ದೆಯನ್ನು ನಿಯಂತ್ರಿಸುತ್ತದೆ.
ನ್ಯಾರ್ಕೊಲೆಪ್ಸಿಯಿಂದ ಬಳಲುತ್ತಿರುವವರು ರಾತ್ರಿ ವೇಳೆ ಸಾಕಷ್ಟು ನಿದ್ದೆ ಮಾಡಿದ್ದರೂ ಹಗಲು ವೇಳೆ ಆಗಾಗ ನಿದ್ದೆಗೆ ಜಾರುತ್ತಾರೆ. ಆಗಾಗ ಕಾಡುವ ಸುಸ್ತು, ಮನೋವಿಕಲ್ಪ, ನಿದ್ರಾ ಭಂಗ, ಸ್ನಾಯುಗಳ ಮೇಲೆ ನಿಯಂತ್ರಣ ಕಳೆದುಕೊಳ್ಳುವುದು ಈ ರೋಗದ ಇತರ ಕೆಲವು ಲಕ್ಷಣಗಳು. ಸ್ನಾಯುಗಳ ಮೇಲೆ ನಿಯಂತ್ರಣ ಕಳೆದುಕೊಳ್ಳುವ ರೋಗದ ಲಕ್ಷಣ ಭಾವನಾತ್ಮಕ ಸ್ಥಿತಿಗೆ ಸಂಬಂಸಿದೆ. ಅಂದರೆ, ನಗು, ದು:ಖ, ಆಶ್ಚರ್ಯ, ಹತಾಶೆಯಂತಹ ಅತಿ ಭಾವುಕ ಸ್ಥಿತಿಯಲ್ಲಿ ರೋಗದ ಲಕ್ಷಣ ಇಮ್ಮಡಿಸುತ್ತದೆ.
ನ್ಯಾರ್ಕೊಲೆಪ್ಸಿಯ ಪರಿಣಾಮ ರೋಗಿಗೆ ಬದುಕಿನ ಬಹುತೇಕ ಅಂಶಗಳಲ್ಲಿ ಪ್ರತಿಧ್ವನಿಸುತ್ತದೆ. ವ್ಯಕ್ತಿ ಇದಕ್ಕಿದ್ದಂತೆ ನಿದ್ದೆಗೆ ಜಾರುವುದರಿಂದ ಅಥವಾ ಸ್ನಾಯುಗಳ ಮೇಲಿನ ನಿಯಂತ್ರಣ ಕಳೆದುಕೊಳ್ಳುವುದರಿಂದ ವಾಹನ ಚಾಲನೆ ಮಾಡುವುದು ಅಥವಾ ಏಕಾಂಗಿಯಾಗಿ ಎಲ್ಲಾದರೂ ಹೋಗುವುದು ಅಪಾಯಕಾರಿ. ನೆನಪಿನ ಶಕ್ತಿ ಕುಂದಬಹುದು. ವ್ಯಕ್ತಿಯಾವುದೇ ವಿಷಯದ ಮೇಲೆ ಗಮನ ಕೇಂದ್ರೀಕರಿಸಲು ಕಷ್ಟವಾಗಬಹುದು. ಇದು ವ್ಯಕ್ತಿಯ ವೃತ್ತಿ ಬದುಕಿನ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅಲ್ಲದೆ, ಮನಸ್ಸಿನ ಮೇಲೆಯೂ ಗಂಭೀರ ಪರಿಣಾಮ ಬೀರಬಹುದು. ಖಿನ್ನತೆ ಅಥವಾ ಆತಂಕ ಹುಟ್ಟು ಹಾಕಬಹುದು. ದಾಂಪತ್ಯ ಸಂಬಂಧ ಕೆಡಿಸಬಹುದು. ಮಕ್ಕಳಲ್ಲಿ ಈ ಸಮಸ್ಯೆ ಕಲಿಕೆಯ ಸಾಮರ್ಥ್ಯ ಕುಗ್ಗಿಸಬಹುದು. ಶಾಲೆಗೆ ಗೈರು ಹಾಜರಾಗುವ ಪ್ರವೃತ್ತಿ ಬೆಳೆಸಬಹುದು.
ಇದರ ಚಿಕಿತ್ಸೆಗಾಗಿ ಸಾಧಾರಣವಾಗಿ ಉದ್ದೀಪಕ, ಮನಸ್ಸಿನ ಖಿನ್ನತೆ ಕಡಿಮೆ ಮಾಡುವ ಔಷಧಗಳನ್ನು ಬಳಸಲಾಗುತ್ತದೆ. ಇವೆಲ್ಲವೂ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದರಿಂದ ಇವುಗಳನ್ನು ತೆಗೆದುಕೊಳ್ಳುವುದಕ್ಕೂ ಮೊದಲು ವೈದ್ಯರ ಸಲಹೆ ಪಡೆಯುವುದು ಅವಶ್ಯ. ಔಷಧ ಚಿಕಿತ್ಸೆಯ ಜತೆ ವ್ಯಕ್ತಿ ನಡತೆಯಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ವೈದ್ಯರು ಸೂಚಿಸಬಹುದು. ಇವೆಲ್ಲವೂ ವ್ಯಕ್ತಿಯಲ್ಲಿ ಚುರುಕನ್ನು ತುಂಬಿ, ನಾರ್ಕೊಲೆಪ್ಸಿ ನಿಯಂತ್ರಣಕ್ಕೆ ಸಹಾಯ ಒದಗಿಸುತ್ತವೆ.
ನಿಯಮಿತವಾಗಿ ನಿದ್ದೆ ಮಾಡಬೇಕು. ಜತೆಗೆ ಹಗಲು ವೇಳೆ ಲಘು ವಿಶ್ರಾಂತಿ ಪಡೆಯುವುದು. ಅಲ್ಲದೆ, ಕೆಫಿನ್, ಆಲ್ಕೊಹಾಲ್, ನಿಕೊಟಿನ್‌ಗಳಿರುವ ಪದಾರ್ಥಗಳ ಸೇವನೆ ಬೀಡುವುದು ಒಳ್ಳೆಯದು. ಈ ಅಂಶಗಳಿರುವ ಪಾನೀಯಗಳು ನಿದ್ದೆ ಬೇಕೆಂದಾಗ ಮಾಡಲು ಅಡ್ಡಿಪಡಿಸುತ್ತವೆ. ನಿಯಮಿತವಾಗಿ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳುವುದು ಉತ್ತಮ. ಜೀವನ ಶೈಲಿಯಲ್ಲಿನ ಈ ಎಲ್ಲಾ ಬದಲಾವಣೆಗಳು ಸಮಸ್ಯೆಗೆ ಸ್ವಲ್ಪ ಮಟ್ಟಿನ ಪರಿಹಾರ ನೀಡಬಲ್ಲವು ಎನ್ನುತ್ತಾರೆ ವೈದ್ಯರು.
- ಮಹಾಬಲೇಶ್ವರ ಹೊನ್ನೆಮಡಿಕೆ

No comments: